ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ”ಹೊಸಬೆಳಕು” ಕಾರ್ಯಕ್ರಮ
ಅರಸೀಕೆರೆ:ಇಂದಿನ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿ ತಮ್ಮ ಯೌವನವನ್ನು ಹಾಳು ಮಾಡಿಕೊಂಡು ಸಮಾಜಕ್ಕೆ ಮತ್ತು ಮನೆಗೆ ಮಾರಕವಾಗುತ್ತಿದ್ದಾರೆ ಎಂದು ದಿಬ್ಬದಹಳ್ಳಿ ಶ್ಯಾಮ ಸುಂದರ್ ಹೇಳಿದರು.
ಅವರು ಡಿ ಎಂ ಕುರ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ” ಹೊಸ ಬೆಳಕು”ಎಂಬ ಪರಿಕಲ್ಪನೆ ಯೊಂದಿಗೆ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಸಾಂಪ್ರದಾಯಿಕವಾಗಿ ನಡೆಯುವ ಇಂತಹ ಕಾರ್ಯಕ್ರಮಕ್ಕೆ ವೆಲ್ ಕಂ ಪಾರ್ಟಿ ಎಂದು ಕರೆದು ಮೈ ಕೈ ಗೆಲ್ಲ ಕೇಕ್ ಮೆತ್ತಿಕೊಂಡು ನಮ್ಮ ಭಾರತೀಯ ಆಹಾರ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ.
ಯುವಕರ ಮಾನಸಿಕ ಖಿನ್ನತೆಯನ್ನು ದೂರ ಮಾಡುವ ಹಾಗೂ ಅವರಿಗೆ ಉಲ್ಲಾಸ ತರುವ ನಿಟ್ಟಿನಲ್ಲಿ ಈ ಕಾಲೇಜಿನಲ್ಲಿ ಆಚರಿಸುತ್ತಿರುವ “ಹೊಸ ಬೆಳಕು” ಎಂಬ ವಿನೂತನ ಕಾರ್ಯಕ್ರಮ ಮಾದರಿಯಾಗಿದೆ ಎಂದರು.
ಈ ಹೊಸ ಬೆಳಕು ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ “ಜ್ಞಾನಜ್ಯೋತಿ ದೀಪದಾನ ” ಮಾಡುವುದರ ಮೂಲಕ ಅವರನ್ನು ಸ್ವಾಗತಿಸಿದರು.
“ಅಕ್ಷರ ಅರಿವು ಅರಿವೆ “ಎಂಬ ಪರಿಕಲ್ಪನೆ ಯೊಂದಿಗೆ ಗ್ರಾಮದ ಮುಖಂಡರಾದ ಸುರೇಶ್, ಲೋಕೇಶ್, ಚನ್ನಬಸಪ್ಪ ಇವರುಗಳು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಿ ಉಪನ್ಯಾಸಕರ ಈ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೇಮಕುಮಾರಿ ವಹಿಸಿದ್ದರು. ಉಪನ್ಯಾಸಕ ಶಿವಮೂರ್ತಿ ಸ್ವಾಗತಿಸಿದರು. ಡಾ:ಕೆ ಎಸ್ ಹರಶಿವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಅರ್ಪಿತ,ಸಿಂಚನ, ತೇಜಸ್ವಿನಿ ತಮ್ಮ ಹೊಸ ಅನುಭವ, ಅನಿಸಿಕೆಗಳನ್ನು ಹಂಚಿಕೊಂಡರು. ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.