ಅರಸೀಕೆರೆ: ಕಾಶ್ಮೀರ ಪಹಲ್ಗಾಮ್ ನಲ್ಲಿ 26 ಪ್ರವಾಸಿಗರ ಹತ್ಯೆ ಮಾಡಿದ್ದ ಭಯೋತ್ಪಾದಕರಿಗೆ ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನಕ್ಕೆ ಉತ್ತರಿಸಿದ ಭಾರತೀಯ ಯೋಧರಿಗೆ ಆತ್ಮಸ್ಥೈರ್ಯ ತುಂಬಲು ಮತ್ತು ರಾಷ್ಟ್ರ ರಕ್ಷಣೆಗಾಗಿ ಜೂ.5 ರಂದು ನಗರದಲ್ಲಿ ತಿರಂಗ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಅಯೋಜಕರು ತಿಳಿಸಿದರು.
ನಗರಸಭೆ ಅಧ್ಯಕ್ಷರಾದ ಎಂ.ಸಮೀವುಲ್ಲಾ ಇವರನ್ನು ಭೇಟಿ ಮಾಡುವುದರ ಆಹ್ವಾನಿಸಿದ ರಾಷ್ಟ್ರ ರಕ್ಷಣೆಗಾಗಿ ನಾಗರೀಕರು ತಂಡದ ಯತೀಶ್ ಕುಮಾರ್ ಮಾತನಾಡಿ ಜೂ.5 ಗುರುವಾರ ಬೆಳಿಗ್ಗೆ 10 ಗಂಟೆಗೆ ತಾಲ್ಲೂಕು ಕಚೇರಿಯಿಂದ ಪ್ರಾರಂಭವಾಗಿ ಪ್ರವಾಸಿ ಮಂದಿರ ಎದುರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕೊನೆಗೊಳ್ಳಲಿದೆ.
ಪಕ್ಷಾತೀತವಾಗಿ, ಜಾತ್ಯಾತೀತ ವಾಗಿ, ಧರ್ಮಾತೀತವಾಗಿ ಭಾರತೀಯರು ಒಂದಾಗಿ ಸಿಂಧೂರ್ ಕಾರ್ಯಾಚರಣೆ ಪರವಾಗಿ ಆಯೋಜಿಸಲಾದ ಕಾರ್ಯಕ್ರಮ ಇದಾಗಿದೆ. ಸಮಸ್ತ ನಾಗರೀಕರು ಭಾಗವಹಿಸುವುದರ ಮೂಲಕ ರಾಷ್ಟ್ರ ಜಾಗೃತಿಯೊಂದಿಗೆ, ಸೈನಿಕರಿಗೆ ಆತ್ಮಸ್ಥೈರ್ಯ ತುಂಬಬೇಕಿದೆ.
ಭವ್ಯ ಮೆರವಣಿಗೆಯಲ್ಲಿ ಒಂದು ಸಾವಿರ ಅಡಿ ಉದ್ದದ ತ್ರೀವರ್ಣ ಧ್ವಜ ಪ್ರದರ್ಶನದೊಂದಿಗೆ ವಿದ್ಯಾರ್ಥಿಗಳು, ಅರಸೀಕೆರೆ ನಾಗರೀಕರು , ಜನಪ್ರತಿನಿಧಿಗಳು, ಸಂಘ ಸಂಸ್ಥೆಯವರು ಭಾಗವಹಿಸಲಿದ್ದಾರೆ.
ಇದು ಭಾರತೀಯರೆಲ್ಲರೂ ಒಂದಾಗಿ ಭಾಗವಹಿಸುವ ಕಾರ್ಯಕ್ರಮವಾಗಿದ್ದು, ನಾಗರೀಕರೆಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷ ಎಂ. ಸಮೀವುಲ್ಲ ಮಾತನಾಡಿ ಕಾಶ್ಮೀರ ಪಹಲ್ಗಾವ್ ನಲ್ಲಿ ನಡೆದ ಕಹಿ ಘಟನೆ ಭಾರತೀಯರೆಲ್ಲರೂ ಖಂಡಿಸಬೇಕಾದ ಪ್ರಕರಣವಾಗಿದೆ. ಶಾಂತಿ ಬಯಸುವ ಭಾರತದಲ್ಲಿ ಇಂತಹ ಕೃತ್ಯಗಳ ಬೆಳವಣಿಗೆ ಎಲ್ಲರೂ ಖಂಡಿಸಬೇಕು. ಈ ಘಟನೆಯಲ್ಲಿ 26 ಅಮಾಯಕ ಪ್ರವಾಸಿಗರ ಹತ್ಯೆಗೆ ನಮ್ಮ ಭಾರತೀಯ ಸೈನಿಕರು ತಕ್ಕ ಉತ್ತರವನ್ನು ನೀಡಿದ್ದಾರೆ. ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲು ರಾಷ್ಟ್ರ ಜಾಗೃತಿಗಾಗಿ ತಿರಂಗಾ ಯಾತ್ರೆ ಅರಸೀಕೆರೆ ನಗರದಲ್ಲಿ ಆಯೋಜಿಸಿರುವುದು ಸ್ವಾಗತಾರ್ಹವಾಗಿದೆ.
ಈ ಕಾರ್ಯಕ್ರಮದಲ್ಲಿ ನಾಗರೀಕರೆಲ್ಲರೂ ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಧರ್ಮ ಭೇದವಿಲ್ಲದೆ ಎಲ್ಲರೂ ಒಂದಾಗುವ ಮೂಲಕ ಭಾರತೀಯರಾಗಿ ಭಾಗವಹಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಮನೋಹರ್ ಮೇಸ್ತ್ರಿ, ಪೌರಾಯುಕ್ತ ಕೃಷ್ಣಮೂರ್ತಿ, ಸದಸ್ಯರಾದ ಜಿ.ಟಿ ಗಣೇಶ್, ರೇವಣ್ಣ, ಇಮ್ರಾನ್ ಖಾನ್, ಮುಖಂಡರಾದ ಟಿ.ಆರ್ ನಾಗರಾಜು, ಸಿಖಂದರ್, ರಾಷ್ಟ್ರ ರಕ್ಷಣೆಗಾಗಿ ನಾಗರೀಕರು ತಂಡದ ಸಂಘಟಕರಾದ ಅವೀನಾಶ್ ನಾಯ್ಡು, ಸುನೀಲ್, ಕಿರಣ್ ಬಾಣಾವರ, ಮಂಜುನಾಥ್, ಮನು, ಸಿಂಧು, ಮಾಜಿ ಸೈನಿಕ ನವೀನ್, ನಾಗಭೂಷಣ್, ಸಿದ್ದೇಶ್, ಚೇತನ್ ಜೈನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!