ಅರಸೀಕೆರೆ:ಬಾಣಾವರ ಯೋಜನ ಕಚೇರಿ ವ್ಯಾಪ್ತಿಯ ಕೋಳಗುಂದ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕ ಬಸವಲಿಂಗಯ್ಯ ಮಾತನಾಡಿ
ವಿಶ್ವ ಆರೋಗ್ಯ ಸಂಘಟನೆ ಪ್ರತಿವರ್ಷ ಮೇ 31ನ್ನು ವಿಶ್ವ ತಂಬಾಕು ರಹಿತ ದಿನವಾಗಿ ಆಚರಿಸುತ್ತಿದೆ, ತಂಬಾಕು ಸೇವನೆಯಿಂದ ಮಕ್ಕಳು ತಮ್ಮ ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದು ಯಾವುದೇ ಕೆಟ್ಟ ಹವ್ಯಾಸಗಳನ್ನು ಬೆಳೆಸಿಕೊಳ್ಳದೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಾಣವರ ವಲಯ ಮೂಲಕ ವಿದ್ಯಾರ್ಥಿಗಳು, ಮಹಿಳೆಯರು, ಸಾರ್ವಜನಿಕರು ಹಾಗೂ ಜನಸಮುದಾಯಕ್ಕೆ ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ ಹಾಗೂ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದು ಕೃಷಿ ಮೇಲ್ವಿಚಾರಕ ಗಣೇಶ್ ಹೇಳಿದರು.
ಸಂಪನ್ಮೂಲ ವ್ಯಕ್ತಿ ಪ್ರಸನ್ನ ಕುಮಾರ್ ಸೂರೆ ಅವರು ಮಾತನಾಡಿ
ಕೆಡುಕಿಗೆ ಆಕರ್ಷಣೆ ಹೆಚ್ಚು. ಬೀಡಿ, ಸಿಗರೇಟು ಸೇರಿದಂತೆ ತಂಬಾಕನ್ನು ಬೇರೆ ಬೇರೆ ರೂಪಗಳಲ್ಲಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರಕ.
ತಂಬಾಕು ಉತ್ಪನ್ನಗಳ ಬಳಕೆಯಲ್ಲಿ ಇಡೀ ಪ್ರಪಂಚದಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ.
ತಂಬಾಕು ಸೇವನೆಯಿಂದ ಜಾಗತಿಕವಾಗಿ ಪ್ರತಿವರ್ಷ ಸಾಯುವವರ ಸಂಖ್ಯೆ 70ಲಕ್ಷಕ್ಕಿಂತ ಅಧಿಕ. ಭಾರತದಲ್ಲಿ 10 ಲಕ್ಷ ಜನರು ಬೀಡಿ, ಸಿಗರೇಟ್, ತಂಬಾಕಿನ ನೇರ ಸೇವನೆಯಿಂದ ಉಂಟಾಗುವ ಕ್ಯಾನ್ಸರ್ ಹಾಗೂ ಇತರೆ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ, ತಂಬಾಕು ಸೇವೆನೆಯಿಂದ ಕೇವಲ ಗಂಟಲು, ಶ್ವಾಸಕೋಶ ಮಾತ್ರವಲ್ಲದೆ ಅಡಿಯಿಂದ ಮುಡಿವರೆಗೆ ನಮ್ಮ ದೇಹದ ಪ್ರತಿಯೊಂದು ಜೀವ ಕೋಶದ ಮೇಲೆ ಅದು ಮಾರಕ ಪರಿಣಾಮವನ್ನುಂಟು ಮಾಡುತ್ತದೆ.
ಬೇರೆಯವರು ಸೇದಿ ಬಿಟ್ಟ ಸಿಗರೇಟು ಅಥವಾ ಬೀಡಿಯ ಹೊಗೆಯನ್ನು ಸೇವಿಸುವವರಿಗೂ ಮೊದಲು ಸೇದಿದವರಿಗೆ ಇರುವ ಅಪಾಯಗಳೇ ಇವೆ ಇದರಿಂದ ಮಕ್ಕಳು ಹಾಗೂ ವಯಸ್ಕರಲ್ಲಿ ರೋಗಗಳು ಹಾಗೂ ಅಕಾಲಿಕ ಮರಣಗಳು ಸಂಭವಿಸುತ್ತವೆ.
13 ರಿಂದ 15 ವಯಸ್ಸಿನ ಮಕ್ಕಳು ಹೆಚ್ಚಾಗಿ ತಂಬಾಕು ಸೇವನೆ ಆಕರ್ಷಿತರಾಗಿದ್ದಾರೆ.
ಪ್ರತಿಯೊಬ್ಬರೂ ಕೂಡ ತಂಬಾಕು ಸೇವನೆಯಿಂದ ದೂರ ಇದ್ದು ತಮ್ಮ ಪ್ರಜ್ವಲ ಭವಿಷ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರು ಪುಟ್ಟರಾಜು, ಸೇವಾ ಪ್ರತಿನಿಧಿ ಮಮತಾ ಹಾಗೂ ಶಾಲಾ ಮಕ್ಕಳು ,ಸಹ ಶಿಕ್ಷಕರು ಭಾಗವಹಿಸಿದ್ದರು.