500 ಕೋಟಿ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮತ್ತು
ಅಭಿನಂದನೆ ಕಾರ್ಯಕ್ರಮ
ಅರಸೀಕೆರೆ:ತಾಲೂಕಿನ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅನುದಾನಗಳನ್ನು ನೀಡಿರುವ ಹಾಗೂ ಶಂಕು ಸ್ಥಾಪನೆಗೊಳ್ಳುವ ಕಾರ್ಯಕ್ರಮಗಳಿಗೆ ಅನುದಾನವನ್ನು ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಸಚಿವ ಸಂಪುಟದ ಸದಸ್ಯರಿಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಜುಲೈ 26ರಂದು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ ಎಂ ಶಿವಲಿಂಗೇಗೌಡ ಹೇಳಿದರು.
ನಗರದ ತಾಲೂಕು ಶ್ರೀ ಜೇನುಕಲ್ ಕ್ರೀಡಾಂಗಣದಲ್ಲಿ ಗುರುವಾರ ಸಿದ್ಧತೆ ಪರಿಶೀಲಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇಂಜಿನಿಯರಿಂಗ್ ಕಾಲೇಜ್, ಪಾಲಿಟೆಕ್ನಿಕ್ ಕಾಲೇಜ್, ಈಜುಕೊಳ, ಸಂತೆಪೇಟೆ ವಾಣಿಜ್ಯ ಸಂಕೀರ್ಣ, ಹೌಸಿಂಗ್ ಫಾರ್ ಆಲ್ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ 300 ಮನೆಗಳ ಹಸ್ತಾಂತರ ಸೇರಿದಂತೆ ಇನ್ನಿತರ ಹಲವು ಯೋಜನೆಗಳ ಲೋಕಾರ್ಪಣೆ ಮತ್ತು ಹಲವು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಲಿದೆ. 250 ಕೋಟಿ ವೆಚ್ಚದಲ್ಲಿ ಸೌರ ವಿದ್ಯುತ್ ಘಟಕ, 35 ಕೋಟಿ ವೆಚ್ಚದಲ್ಲಿ ಗೀಜಿಹಳ್ಳಿ ಸಮೀಪ ಕಾರ್ಮಿಕ ಮತ್ತು ಮಕ್ಕಳ ವಸತಿ ಶಾಲೆಗಳು, ಫುಡ್ ಕೋರ್ಟ್, ಒಳಾಂಗಣ ಕ್ರೀಡಾಂಗಣ, 25 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ, ಶ್ರೀ ಬಸವೇಶ್ವರರ ಪ್ರತಿಮೆ, ಶ್ರೀ ಸಂಗೊಳ್ಳಿ ರಾಯಣ್ಣ ಪ್ರತಿಮೆ ಹಾಗೂ ತಾಲೂಕು ಪತ್ರಕರ್ತರ ಭವನ ಸೇರಿದಂತೆ ಒಟ್ಟು 500 ಕೋಟಿಗು ಹೆಚ್ಚು ಕಾಮಗಾರಿಗಳ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ನಾಳೆ ನಡೆಯುವ ಕಾರ್ಯಕ್ರಮಕ್ಕೆ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ನಿರ್ಮಾಣ, 60 ಸಾವಿರ ಜನ ಸೇರುವ ನಿರೀಕ್ಷೆ ಇದ್ದು ಆಸನ ವ್ಯವಸ್ಥೆ ,ಕುಡಿಯುವ ನೀರು, ಶೌಚಾಲಯ,ರಸ್ತೆ ಸೇರಿದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎಂ ಸಮಿವುಲ್ಲಾ,ಉಪಾಧ್ಯಕ್ಷ ಮನೋಹರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಮುರುಂಡಿ ಶಿವಯ್ಯ, ಜಿಲ್ಲಾ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮ ಶೇಖರ್, ಇನ್ನಿತರರು ಇದ್ದರು.