ಜನಸಂಪರ್ಕ ಸಭೆಯಲ್ಲಿ 77 ಕುಟುಂಬಗಳಿಗೆ ಬಿ ಖಾತೆ ವಿತರಣೆ
ಅರಸೀಕೆರೆ :ನಗರದ ತಾಲೂಕು ಕಚೇರಿ ಆವರಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ 77 ಕುಟುಂಬಗಳಿಗೆ ಶಾಸಕರು ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ ಎಂ ಶಿವಲಿಂಗೇಗೌಡ ನಗರಸಭೆ ಕಡೆಯಿಂದ ಈ ಸ್ವತ್ತು ಖಾತೆ ಪ್ರತಿಗಳನ್ನು ವಿತರಣೆ ಮಾಡಿದರು.
ಜನ ಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿ ನರೇಗಾ ಯೋಜನೆ ಅಡಿ ಕೆಲಸ ಮಾಡಿದ ಅಧಿಕಾರಿಗಳು ಹಾಗೂ ಇಂಜಿನಿಯರ್ ಗಳಿಗೆ ಸಂಬಳ ಹಾಕುವಂತೆ ತಹಶೀಲ್ದಾರ್ ರವರಿಗೆ ಹೇಳಿದರು.
ತೋಟದ ಮನೆ ಹಾಗೂ ಜಮೀನಿನಲ್ಲಿ ಇರುವ ಮನೆಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ನಿರಂತರ ಜ್ಯೋತಿ ನೀಡಬೇಕೆಂದು ಚೆಸ್ಕಾಂ ಅಧಿಕಾರಿಗೆ ಸೂಚನೆ ನೀಡಿದರು.
ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ತಿಪ್ಪೇಸ್ವಾಮಿ ಮೇಲೆ ಸಾರ್ವಜನಿಕ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ವಿಚಾರಣೆ ಮಾಡಿ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ತಾಲೂಕು ವೈದ್ಯಾಧಿಕಾರಿಗೆ ಸೂಚಿಸಿದರು.
ಶ್ಯಾನೆಗೆರೆ ಗ್ರಾಮ ಪಂಚಾಯಿತಿಯಲ್ಲಿ 80 ಮನೆಗಳಿಗೆ ಅರಣ್ಯ ಇಲಾಖೆಯಿಂದ ನೋಟಿಸ್ ಬಂದಿರುವುದರಿಂದ ಅವುಗಳ ಬಗ್ಗೆ ಪಿಡಿಒಗಳು ಸರಿಯಾದ ಮಾಹಿತಿ ತೆಗೆದುಕೊಂಡು, ಆ ಕುಟುಂಬಗಳಿಗೆ ನ್ಯಾಯ ದೊರಕಿಸಿ ಕೊಡುವಂತೆ ಪಿಡಿಒ ಗಳಿಗೆ ಸೂಚನೆ ನೀಡಿದರು.
ಅರಸೀಕೆರೆ ತಾಲೂಕಿಗೆ ಸರ್ಕಾರದಿಂದ ರಾಜೀವ್ ಗಾಂಧಿ ವಸತಿ ಯೋಜನೆ ಅಡಿ 4900 ಮನೆಗಳು ಮಂಜುರಾಗಿವೆ ಎಂದು ತಿಳಿಸಿದರು.
ಶಕ್ತಿ ಯೋಜನೆ ಅಡಿ ಮಹಿಳೆಯರು 500 ಕೋಟಿಗೂ ಹೆಚ್ಚು ಪ್ರಯಾಣಿಸಿರುವುದಕ್ಕೆ ಸಿಹಿ ಹಂಚಿಕೆ ಮಾಡಿ ಶಕ್ತಿ ಯೋಜನೆ ಅಡಿ ಬಸ್ ಗೆ ಅಲಂಕಾರ ಮಾಡಿ ಇದೇ ವೇಳೆ ಹಸಿರು ನಿಶಾನೆ ನೀಡಿ ಚಾಲನೆ ನೀಡಿದರು.
ಕೆಲವು ಮಹಿಳೆಯರು ನಮಗೆ ಇದುವರೆಗೂ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಎಂದು ಆರೋಪ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು 26.7. 2025 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅರಸೀಕೆರೆಗೆ ಬರಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಸಭೆ ಅಧ್ಯಕ್ಷರಾದ ಎಂ ಸಮಿವುಲ್ಲಾ,ಉಪಾಧ್ಯಕ್ಷ ಮನೋಹರ ಮೇಸ್ತ್ರಿ, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಧರ್ಮಶೇಖರ್, ತಹಶೀಲ್ದಾರ್ ಎಂ ಜಿ ಸಂತೋಷ್ ಕುಮಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹೆಚ್ ಕೆ ಸತೀಶ್, ಗ್ಯಾರೆಂಟಿ ಯೋಜನೆ ಸದಸ್ಯರುಗಳು, ವಿವಿಧ ಇಲಾಖೆ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ವಿವಿಧ ಇಲಾಖೆ ನೌಕರರು, ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.