ಪ್ರವೇಶ ದ್ವಾರದ ನೂತನ ಸ್ವಾಗತ ನಾಮಫಲಕಗಳ ಲೋಕಾರ್ಪಣೆ
ಅರಸೀಕೆರೆ: ತಾಲೂಕಿನ ಐತಿಹಾಸಿಕ, ಧಾರ್ಮಿಕ, ಪ್ರೇಕ್ಷಣೀಯ ಸ್ಥಳಗಳನ್ನು ಪರಿಚಯಿಸುವ ಉದ್ದೇಶದಿಂದ ನಗರದ ಪ್ರವೇಶ ದ್ವಾರದಲ್ಲಿ ನಾಮಫಲಕ ಅಳವಡಿಸಲಾಗಿದೆ. ಪ್ರವೇಶ ದ್ವಾರ ನಗರದ ಸೌಂದರ್ಯ ಕರಣಕ್ಕೆ ನಗರಸಭೆ ಒತ್ತು ನೀಡಲಾಗಿದ್ದು, ನಗರದ ಪ್ರವೇಶ ದ್ವಾರಗಳಲ್ಲಿ ಬೃಹತ್ ಸ್ವಾಗತ ನಾಮಫಲಕಗಳನ್ನು ನಿರ್ಮಿಸಲಾಗಿದೆ ಎಂದು ಶಾಸಕರು ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷರಾದ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
ಅರಸೀಕೆರೆ ನಗರ ಪ್ರವೇಶಕ್ಕೆ ಸ್ವಾಗತ ನಾಮಫಲಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಈ ನಾಮಫಲಕಗಳು ಮಾಲೆಕಲ್ಲು ತಿರುಪತಿ ಜಾತ್ರೆ ನೆನಪಿಗಾಗಿ ಮತ್ತು ತಾಲೂಕಿನ ಐತಿಹಾಸಿಕ, ಧಾರ್ಮಿಕ, ಪ್ರೇಕ್ಷಣೀಯ ಸ್ಥಳಗಳನ್ನು ಪರಿಚಯಿಸುವ ಉದ್ದೇಶ ಹೊಂದಿವೆ ಎಂದರು.
ನಗರಸಭೆ ಅಧ್ಯಕ್ಷ ಎಂ. ಸಮಿವುಲ್ಲಾ ಮಾತನಾಡಿ ನಗರಸಭೆಯಿಂದ 39 ಲಕ್ಷ ವೆಚ್ಚದಲ್ಲಿ ಕಂತೆನಹಳ್ಳಿ ಮತ್ತು ಜಾಜೂರು ಬಳಿ ಈ ನಾಮಫಲಕಗಳನ್ನು ಸ್ಥಾಪಿಸಲಾಗಿದೆ. ಗರುಡನಗಿರಿ ರಸ್ತೆಯಲ್ಲಿ 18 ಲಕ್ಷ ವೆಚ್ಚದಲ್ಲಿ ನೂತನ ಬೀದಿ ದೀಪಗಳನ್ನು ಅಳವಡಿಸಲಾಗಿದ್ದು, ಇದು ಸಂಚಾರಿಗಳಿಗೆ ಅನುಕೂಲವಾಗಲಿದೆ.
ನಗರದ ಬೆಂಗಳೂರು-ಹೊನ್ನಾವರ ರಸ್ತೆ ಡಾಂಬರೀಕರಣಕ್ಕೆ 8 ಕೋಟಿ ವೆಚ್ಚ ಮಾಡಲಾಗಿದ್ದು, ಸಾಯಿನಾಥ ರಸ್ತೆಯನ್ನು ಡಾಂಬರೀಕರಣ ಮಾಡಲಾಗಿದೆ. ಮೂಲ ಸೌಲಭ್ಯಗಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ನಗರಸಭೆ ಉಪಾಧ್ಯಕ್ಷ ಮನೋಹರ ಮೇಸ್ತ್ರಿ,ಸ್ಥಳೀಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅರುಣ್ ಕುಮಾರ್,ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.