ಅದ್ದೂರಿಯಾಗಿ ನಡೆದ ಅಮರಗಿರಿ ತಿರುಪತಿ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ರಥೋತ್ಸವ

ಅರಸೀಕೆರೆ :ಸುಕ್ಷೇತ್ರ ಅಮರಗಿರಿ ತಿರುಪತಿಯಲ್ಲಿ ನೆಲೆಸಿರುವ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿಯ ಮಹಾ ರಥೋತ್ಸವವು ವಿಜೃಂಭಣೆಯಿಂದ ಜರುಗಿತು. ಭಕ್ತರು ಗೋವಿಂದ ಗೋವಿಂದ ಎಂದು ಗೋವಿಂದ ನಾಮ ಸ್ಮರಣೆಯೊಂದಿಗೆ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಪ್ರತಿ ವರ್ಷ ಆಷಾಢ ಮಾಸದಲ್ಲಿ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷವಾಗಿದ್ದು ತಾಲೂಕಿನಿಂದ ಅಷ್ಟೇ ಅಲ್ಲದೆ ರಾಜ್ಯದ ನಾನಾ ಭಾಗದಿಂದ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿಯ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಶ್ರೀದೇವಿ ಭೂದೇವಿ ಸಮೇತನದ ಶ್ರೀ ಲಕ್ಷ್ಮಿವೆಂಕಟರಮಣ ಸ್ವಾಮಿಯ ರಥೋತ್ಸವವನ್ನು ಕಣ್ತುಂಬಿಕೊಂಡರೆ, ಇತ್ತೀಚಿಗಷ್ಟೇ ಮದುವೆಯಾದ ನೂತನ ವಧು-ವರರು ಬೆಟ್ಟದ ಮೇಲೆ ನೆಲೆಸಿರುವ ಪದ್ಮಾವತಿ ಸಮೇತನಾದ ಶ್ರೀ ಲಕ್ಷ್ಮಿವೆಂಕಟರಮಣ ಸ್ವಾಮಿಯ ದರ್ಶನ ಮಾಡಿ ತೇರಿನ ಕಳಸಕ್ಕೆ ಬಾಳೆಹಣ್ಣನ್ನು ಒಡೆದರೆ ಮನದ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಭಕ್ತರಲಿರುವುದರಿಂದ, ಈ ರಥೋತ್ಸವದಲ್ಲಿ ನೂತನ ವಧು ವರರನ್ನು ಸಹ ಹೆಚ್ಚಾಗಿ ಜಾತ್ರೆಯಲ್ಲಿ ಕಾಣಬಹುದು.

ಕಳೆದ ನಾಲ್ಕೈದು ದಿನಗಳಿಂದ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಅರಸೀಕೆರೆ ನಗರ ಸೇರಿದಂತೆ ತಿರುಪತಿ ಜಗಮಗಿಸುವ ದೀಪ ಅಲಂಕಾರದಿಂದ ಕಂಗೊಳಿಸುತ್ತಿದ್ದು, ರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ಬೆಟ್ಟದ ಮೇಲೆ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯ ತಪ್ಪಲಲ್ಲಿರುವ ಶ್ರೀ ಲಕ್ಷ್ಮಿಗೋವಿಂದರಾಜ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು ದೇವಾಲಯದ ಸಂಪ್ರದಾಯದಂತೆ ನಡೆದವು. ನಂತರ ಶ್ರೀದೇವಿ ಭೂದೇವಿ ಸಮೇತನಾದ ಶ್ರೀ ಲಕ್ಷ್ಮಿವೆಂಕಟರಮಣ ಸ್ವಾಮಿಯ ಮೂರ್ತಿಯನ್ನ ಉತ್ಸವದ ಮೂಲಕ ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಿ ಮಹಾಮಂಗಳಾರತಿ ಬೆಳಗುತ್ತಿದ್ದಂತೆ. ಈ ಶುಭ ಗಳಿಗೆಗಾಗಿ ಕಾಯುತ್ತಿದ್ದ ಭಕ್ತ ವೃಂದ ಗೋವಿಂದ ನಾಮಸ್ಪರಣೆ ಮಾಡುತ್ತ ರಥವನ್ನ ಎಳೆದು ಪುನೀತರಾದರು.
ರಥೋತ್ಸವದ ಸಂದರ್ಭದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ, ಕರವೇ ರಾಜಾಧ್ಯಕ್ಷ ಟಿ ಎ ನಾರಾಯಣಗೌಡ, ತಹಶೀಲ್ದಾರ್ ಎಂ ಜಿ ಸಂತೋಷ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್, ದೇವಸ್ಥಾನದ ಅಭಿವೃದ್ಧಿ ಸಮಿತಿಯ ಟಿ ಆರ್ ನಾಗರಾಜ್, ನಗರಸಭಾ ಅಧ್ಯಕ್ಷ ಎಂ ಸಮಿವುಲ್ಲಾ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್, ಚಲನಚಿತ್ರ ನಟ ದೊಡ್ಡಣ್ಣ ,ದೇವಸ್ಥಾನ ಕಮಿಟಿಯ ವೆಂಕಟೇಶ್ ಬಾಬು, ಚಂದ್ರು, ಹೇಮಂತ್ , ರೇಣುಕ, ಕೃಷ್ಣ, ತುಳಸಿ ದಾಸ್, ಎನ್ ಡಿ ಪ್ರಸಾದ್ ಸೇರಿದಂತೆ ನಾನಾ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಬ್ರಾಹ್ಮಣ ಸಮಾಜ, ಆರ್ಯವೈಶ್ಯ ಸಮಾಜ ಹಾಗು ದೇವಾಂಗ ಸಮಾಜದ ವತಿಯಿಂದ ಸಾಮೂಹಿಕ ಅನ್ನಸಂತರ್ಪಣೆಯನ್ನು ಹಮ್ಮಿಕೊಂಡಿದ್ದರೆ, ನಗರದಿಂದ 3 ಕಿಮೀ ದೂರದಲ್ಲಿರುವ ಮಾಲೇಕಲ್ ತಿರುಪತಿಗೆ ಭಕ್ತರು ಹೋಗಿ ಬರಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿತ್ತು.
ಸಹಸ್ರಾರು ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಪಾಲ್ಗೊಳ್ಳುವುದರಿಂದ ಯಾವುದೇ ರೀತಿಯ ತೊಂದರೆ ಸಂಭವಿಸದ ರೀತಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿತ್ತು.

Leave a Reply

Your email address will not be published. Required fields are marked *

error: Content is protected !!