ಅರಸೀಕೆರೆ:ಮೇ 31ರಂದು ಬೋರನಕೊಪ್ಪಲು ತೆಂಗು ಸಂಶೋಧನಾ ಮತ್ತು ಉತ್ಪಾದನಾ ಕೇಂದ್ರದ ಮುಖ್ಯಸ್ಥರಾದ ಜಗದೀಶ್, ಹಾಸನ ತೋಟಗಾರಿಕಾ ಉಪ ನಿರ್ದೇಶಕರಾದ ಮಂಗಳ.ಕೆ, ಅರಸೀಕೆರೆ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸೀಮಾ ಬಿ.ಎ, ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ಕಸಬಾ, ಬಾಣವರ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಚಿಕ್ಕೂರು, ನಾಗತಿಹಳ್ಳಿ , ಕೆ.ವೆಂಕಟಪುರ ಗ್ರಾಮಗಳ ತೆಂಗು ಬೆಳೆಗಾರರ ವಿವಿಧ ತೋಟಗಳನ್ನು ಪರಿಶೀಲಿಸಿದಾಗ ತೆಂಗಿನ ತೋಟಗಳಲ್ಲಿ ಅಧಿಕ ಉಷ್ಣಾಂಶದಿಂದ ಬಿಸಿಲಿನ ಬೇಗೆಯಿಂದ ಎಲೆಗಳು ಒಣಗಿರುವುದು ಕಂಡುಬಂದಿದ್ದು, ಮಳೆಯಾದ ನಂತರ ಹೊಸ ಗರಿಗಳು ಬರುತ್ತಿದ್ದು ಇದು ರೋಗವಾಗಿರುವುದಿಲ್ಲವೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ತಾಲೂಕಿನಲ್ಲಿ ಕಾಂಡ ಸೋರುವ ರೋಗವು ಕಂಡು ಬಂದಿದ್ದು, ಇದರ ಹತೋಟಿಗೆ ಕೆರೆಗಳಗೋಡು ಮಣ್ಣನ್ನು ತೆಂಗಿನ ತೋಟಗಳಿಗೆ ಹೊಡೆಸಬಾರದುಎಂದು ತಿಳಿಸಿದ್ದು. ಈಗ ಕಾಂಡ ಸೋರುವುದು ಕಂಡು ಬಂದಿದ್ದು 1.8 ಮೀಟರ್ ಸುತ್ತಳತೆಯಲ್ಲಿ ಮಣ್ಣನ್ನು ಸಡಿಲಿಸಿ 5 ಕೆಜಿ ಬೇವಿನ ಹಿಂಡಿ, 2.5 ಕೆಜಿ ಪೊಟ್ಯಾಶ್ ಗೊಬ್ಬರವನ್ನು ಪೂರ್ವ ಮುಂಗಾರಿನಲ್ಲಿ ಪ್ರತಿ ಮರಕ್ಕೆ ನೀಡುವಂತೆ ತಿಳಿಸಿದರು.
ರಸ ಸೋರುತ್ತಿರುವ ತೊಗಟೆ ಭಾಗವನ್ನು ಕೆತ್ತಿ ಶೇಖಡ 10ರ ಬೋಡೋ ಮೂಲಾಮನ್ನು ಅಥವಾ ಶೇಕಡ 5 ರ ಹೆಕ್ಸಾಕೋನಜೋಲ್ ದ್ರಾವಣವನ್ನು ಲೇಪಿಸಬೇಕು. ರೋಗಕ್ಕೆ ತುತ್ತಾದ ಮರಗಳಿಗೆ 3 ಮಿ.ಲೀ. ಹೆಕ್ಸಾಕೋನಜೋಲ್ ನ್ನು100 ಮಿ.ಲೀ. ನೀರಿನಲ್ಲಿ ಬೆರಸಿ 3 ತಿಂಗಳಿಗೊಮ್ಮೆ ಬೇರಿನ ಮೂಲಕ ಕೊಡಬೇಕು.
ನಾಗತಿಹಳ್ಳಿ ಭಾಗದ ತೋಟಗಳಲ್ಲಿ ಕಪ್ಪು ತಲೆ ಹುಳುವಿನ ಹತೋಟಿ ಕ್ರಮವಾಗಿ ಈಗಾಗಲೇ ಗೋನಿಯೋಜಸ್ ಪರೋಪ ಜೀವಿಯನ್ನು ತೋಟಗಳಲ್ಲಿ ಬಿಡಲಾಗಿದ್ದು, ಕಪ್ಪು ತಲೆ ಉಳಿವಿನ ಬಾಧೆಯು ಹತೋಟಿಗೆ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದರು.
