ಶಾಶ್ವತವಾದ ಸಂತೋಷ ಸಿಗಬೇಕಾದರೆ ನಾವು ಸಮಾಜಮುಖಿಯಾಗಿರಬೇಕು- ಡಿ.ಶಮಿಳಾ ಸಿಂಗ್
ಅರಸೀಕೆರೆ : ಮನುಷ್ಯನಿಗೆ ನೆಮ್ಮದಿ ಬೇಕೆಂದರೆ ಮನಸ್ಸಿನಲ್ಲಿ ಸಂತೋಷ ಇರಬೇಕು ಇದನ್ನು ನಾವೇ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಶಾಶ್ವತವಾದ ಸಂತೋಷ ಸಿಗಬೇಕಾದರೆ ನಾವು ಸಮಾಜಮುಖಿಯಾಗಿರಬೇಕು ಎಂದು ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಬೆಂಗಳೂರಿನ ಡಿ.ಶರ್ಮಿಳಾ ಸಿಂಗ್ ಅಭಿಪ್ರಾಯಪಟ್ಟರು.
ಅರಸೀಕೆರೆ ತಾಲ್ಲೂಕಿನ ವಿವಿಧ ಶಾಲೆಗಳಿಗೆ ವಿವಿಧ ಸಂಘ-ಸಂಸ್ಥೆಗಳಿಂದ ದೇಣಿಗೆ ಪಡೆದು ನೀಡಿದರಲ್ಲದೆ ನಗರದ ಶ್ರೀ ಜೇನುಕಲ್ ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಡೆಸ್ಕ್ ವಿತರಿಸಿ ಮಾತನಾಡಿ, ಸಮಾಜಕ್ಕೆ ಏನನ್ನಾದರೂ ಕೊಡಬೇಕು ಎನ್ನುವ ಹೃದಯ ಶ್ರೀಮಂತಿಕೆ ಉಳ್ಳ ಸಂಘ ಸಂಸ್ಥೆಗಳು ದಾನಿಗಳು ಇರುತ್ತಾರೆ, ಅಂಥವರಿಂದ ಶಾಲೆಗಳಿಗೆ ಕೊಡುಗೆ ಕೊಡಿಸುವಂತಹ ಒಂದು ಸಣ್ಣ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ. ಈ ಕಾರ್ಯಾ ನನಗೆ ಸಂತೋಷವನ್ನು ನೀಡಿದೆ, ಆ ಒಂದು ಮಹತ್ಕಾರ್ಯದಲ್ಲಿ ಕೈಜೋಡಿಸುವ ಸಂಘ ಸಂಸ್ಥೆಗಳಿಗೆ ತೃಪ್ತಿಯನ್ನು ನೀಡುತ್ತದೆ, ದಾನಿಗಳು ಕೊಟ್ಟ ವಸ್ತುಗಳು ಸದುಪಯೋಗ ಆಗಬೇಕು. ಆಗ ಮಾತ್ರ ಕೊಟ್ಟವರಿಗೂ ಸಂತೋಷ ಸಿಗುತ್ತದೆ, ಅರಸಿಕೆರೆ ನಗರ ಹಾಗೂ ಗ್ರಾಮಾಂತರದ ಮುದ್ದನಹಳ್ಳಿ, ತಿರುಪತಿ ಗ್ರಾಮದ ಶಾಲೆಗಳಿಗೂ ಸಹ ಡೆಸ್ಕ್ ನೀಡಲಾಯಿತು. ಅಲ್ಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬಹಳ ಸಂತೋಷ ವ್ಯಕ್ತಪಡಿಸಿದ್ದರು.ಕೆಲವು ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಅಕ್ವಾ ಗಾರ್ಡ್ ಬೇಡಿಕೆ ಇಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಆ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು, ಡೆಸ್ಕ್ ವಿತರಣಾ ಕಾರ್ಯಕ್ರಮಕ್ಕೆ ಸಿ ಆರ್ ಪಿ ವಿಷ್ಣುವರ್ಧನ್ ಅವರು ನಮ್ಮೊಂದಿಗೆ ಎಲ್ಲಾ ಶಾಲೆಗಳಿಗೂ ಉಪಸ್ಥಿರಿದ್ದು ಪ್ರೋತ್ಸಾಹಿಸಿದ್ದಾರೆ ಅವರಿಗೂ ನಾನು ಆಭಾರಿಯಾಗಿದ್ದೇನೆ ಎಂದರು.
ಪತ್ರಕರ್ತ ಹೆಚ್ ಡಿ ಸೀತಾರಾo ಮಾತನಾಡಿ ಸಮಾಜಕ್ಕೆ ನಾವು ಏನನ್ನಾದರೂ ಮಾಡಬೇಕು ಎಂಬ ಮನಸ್ಸು ಇದ್ದಲ್ಲಿ ಯಾರಿಂದಲಾದರೂ ನೆರವು ಪಡೆದು ಸಮಾಜಮುಖಿಯಾಗಿ ಸೇವೆ ಮಾಡಲು ಸಾಧ್ಯವಾಗುತ್ತದೆ ಎಂಬುದಕ್ಕೆ ಡಿ ಶರ್ಮಿಳಾ ಸಿಂಗ್ ಸಾಕ್ಷಿಯಾಗಿದ್ದಾರೆ.ಸರಕಾರಿ ಶಾಲೆಗಳ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ಇವರು ಇಂದು ಮಕ್ಕಳೊಂದಿಗೆ ತಾವು ಕೂಡ ಮಕ್ಕಳಾಗಿ ಸಂವಾದ ನಡೆಸಿದ್ದಾರೆ.ಇವರು ಭೇಟಿ ನೀಡಿದ ಶಾಲೆಗಳಲ್ಲಿ ಮಕ್ಕಳು ಖುಷಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇವರ ಸಮಾಜ ಸೇವೆ ಹೀಗೆಯೇ ಮುಂದುವರೆಯಲಿ ಸರಕಾರ ಏನೇ ಸೌಲಭ್ಯ ಕೊಟ್ಟರೂ ಸಹ ಸಮುದಾಯದ ಸ್ಪಂದನೆ ಇದ್ದಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ ಎಂದರು.
ಶಾಲಾ ಮುಖ್ಯ ಶಿಕ್ಷಕ ರಾಜಶೇಖರ್ ನಮ್ಮ ಶಾಲೆಯಲ್ಲಿ ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಡೆಸ್ಕ್ ಬಹಳ ಅಗತ್ಯವಿತ್ತು ಆ ಕೊರತೆಯನ್ನು ಡಿ ಶರ್ಮಿಳ ಸಿಂಗ್ ನೀಗಿಸಿದ್ದಾರೆ. ಶುದ್ಧ ಕುಡಿಯುವ ನೀರಿಗಾಗಿ ಅಕ್ವಾ ಗಾರ್ಡ್ ಒಂದನ್ನು ನೀಡಬೇಕೆಂದು ಅವರು ಮನವಿ ಮಾಡಿದರು. ಪ್ರಾರ್ಥನೆಯನ್ನು ಶಿಕ್ಷಕಿ ಭಾರತಿ ಮಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವರ್ಗ, ಪೋಷಕರು ಉಪಸ್ಥಿತರಿದ್ದರು.
