ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶ್ರೀ ಪಾರ್ವತಮ್ಮ ದೇವಾಲಯಕ್ಕೆ ಒಂದು ಲಕ್ಷ ಕೊಡುಗೆ

ಅರಸೀಕೆರೆ: ಸಾಮಾಜಿಕ ಸೇವೆಯಿಂದ ಮನುಷ್ಯನು ಶಾಶ್ವತವಾದ ನೆಮ್ಮದಿಯನ್ನು ಪಡೆಯಲು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನಾಧಿಕಾರಿ ಅಕ್ಷತಾ ರೈ ಅಭಿಪ್ರಾಯ ಪಟ್ಟರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಅರಸಿಕೆರೆ ನಗರದ ಸಮೀಪ ಇರುವ ಕಾಳನಕೊಪ್ಪಲು ಗ್ರಾಮದಲ್ಲಿನ ಶ್ರೀ ಪಾರ್ವತಮ್ಮ ದೇವಿ ದೇವಾಲಯಕ್ಕೆ ಒಂದು ಲಕ್ಷ ರೂಗಳ ಕೊಡುಗೆಯ ಚೆಕ್ಕನ್ನು ದೇವಾಲಯ ಸಮಿತಿಗೆ ನೀಡಿ ಮಾತನಾಡಿದ ಅವರು ಶ್ರೀ ಕ್ಷೇತ್ರದಿಂದ ಸಮಾಜಮುಖಿಯಾಗಿ ವಿವಿಧ ಯೋಜನೆಗಳ ಅಡಿಯಲ್ಲಿ ಕಾರ್ಯಗಳನ್ನು ಮಾಡಲಾಗುತ್ತಿದೆ.
ಕೆರೆ ಕಟ್ಟೆಗಳ ಅಭಿವೃದ್ಧಿ, ಆರ್ಥಿಕ ನೆರವು, ವಿಶೇಷ ಚೇತನರಿಗೆ ಅಗತ್ಯ ಸಲಕರಣೆ, ಶಾಲೆಗಳಿಗೆ ಪೀಠೋಪಕರಣ ಒದಗಿಸುವುದು, ನೈರ್ಮಲ್ಯ ಮತ್ತು ಶುದ್ಧ ನೀರು ಘಟಕಗಳ ಸ್ಥಾಪನೆ, ಮಹಿಳೆಯರು ಸ್ವಾವಲಂಬಿಗಳಾಗಲು ಗುಡಿಗಾರಿಕೆಗಾಗಿ ಧನ ಸಹಾಯ, ವಿದ್ಯಾರ್ಥಿ ವೇತನ ಮತ್ತು ಅತಿ ಬಡವರಿಗೆ ಪಿಂಚಣಿ ಮೊದಲಾದ ಸೌಲಭ್ಯಗಳನ್ನು ಶ್ರೀ ಕ್ಷೇತ್ರದಿಂದ ಮಾಡಲಾಗುತ್ತಿದೆ. ತಾಲೂಕಿನಲ್ಲಿ 33 ಕೆರೆ ಕಟ್ಟೆಗಳನ್ನು ಅಭಿವೃದ್ಧಿಪಡಿಸಲಾಗಿದೆ. 700 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸಹ ನೀಡಲಾಗುತ್ತಿದೆ ಎಂದರು.
ದೇವಾಲಯ ಸಮಿತಿ ಗೌರವಾಧ್ಯಕ್ಷ ಚಂದ್ರಶೇಖರ್ ಹಾಗೂ ಅಧ್ಯಕ್ಷ ರೇವಣ್ಣ ಮಾಧ್ಯಮದೊಂದಿಗೆ ಮಾತನಾಡಿ ದೇವಾಲಯದ ಜೀರ್ಣೋದ್ಧಾರ ಕೆಲಸವನ್ನ ಕೈಗೆತ್ತಿಕೊಂಡಿದ್ದೇವೆ, ಇದಕ್ಕೆ ಆರ್ಥಿಕ ಸಹಾಯ ಬೇಕಾಗಿತ್ತು ನಾವು ಶ್ರೀ ಕ್ಷೇತ್ರಕ್ಕೆ ತೆರಳಿ ಶ್ರೀ ವೀರೇಂದ್ರ ಹೆಗ್ಗಡೆ ಅವರಲ್ಲಿ ಮನವಿ ಮಾಡಲಾಗಿ ರೂ. 1 ಲಕ್ಷ ರೂಗಳ ಚೆಕ್ಕನ್ನು ಇಂದು ಶ್ರೀಮಂಜುನಾಥನ ಆಶೀರ್ವಾದದೊಂದಿಗೆ ಕಳಿಸಿಕೊಟ್ಟಿದ್ದಾರೆ, ಭಕ್ತರು ಶ್ರೀಕ್ಷೇತ್ರಕ್ಕೆ ಕೃತಜ್ಞತರಾಗಿದ್ದೇವೆ ಎಂದರು.
ಉಪಾಧ್ಯಕ್ಷ ಲಕ್ಷ್ಮೀಶ್, ಖಜಾಂಚಿ ರಂಗಸ್ವಾಮಿ, ರಾಘವೇಂದ್ರ, ಮಂಜುನಾಥ್, ಶಾರದ ,ವಿಜಯಲಕ್ಷ್ಮಿ , ಹಿರಿಯ ಪತ್ರಕರ್ತ ಎಚ್ ಡಿ ಸೀತಾರಾಮ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!