ಕೀಟಬಾಧೆಯಿಂದ ಅರಸೀಕೆರೆ ತಾಲ್ಲೂಕು ತೆಂಗು ಬೆಳೆಗಾರರು ಸಂಕಷ್ಟದಲ್ಲಿ – ಶಾಸಕ ಕೆ ಎಂ ಶಿವಲಿಂಗೇಗೌಡ
ಅರಸೀಕೆರೆ :ತಾಲೂಕಿನ ತೆಂಗು ಬೆಳೆಗಳಿಗೆ ರೋಗದಿಂದಾಗಿ ರೈತರು ನಷ್ಟ ಅನುಭವಿಸುತ್ತಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರ ರೋಗ ನಿಯಂತ್ರಣ ಹಾಗೂ ಪರಿಹಾರಕ್ಕೆ ಧಾವಿಸುವಂತೆ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ ಎಂ ಶಿವಲಿಂಗೇಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿ ತೆಂಗು ಬೆಳೆಯ ವಿಸ್ತೀರ್ಣದಲ್ಲಿ ಹಾಸನ ಜಿಲ್ಲೆಯ ಎರಡನೇ ಸ್ಥಾನದಲ್ಲಿದ್ದು, ಒಟ್ಟು 1.18 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ತೆಂಗು ಬೆಳೆಯನ್ನು ಬೆಳೆಯಲಾಗುತ್ತಿದೆ. ಈ ಪ್ರದೇಶದಲ್ಲಿ ಅರಸೀಕೆರೆ ತಾಲೂಕಿನಲ್ಲಿ ಒಟ್ಟು 56473 ಹೆಕ್ಟರ್ ವಿಸ್ತೀರ್ಣದಲ್ಲಿ ತೆಂಗು ಬೆಳೆಯನ್ನು ಬೆಳೆಯುತ್ತಿದ್ದು, ತೆಂಗು ಬೆಳೆಯುವ ಪ್ರದೇಶದಲ್ಲಿ ಮುಂಚೂಣಿಯಲ್ಲಿರುತ್ತದೆ.
ತಾಲೂಕಿನಲ್ಲಿ 56473 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯುತ್ತಿದ್ದರೂ ಸಹ ಬಹುತೇಕ ಶೇಕಡ 90ರಷ್ಟು ಪ್ರದೇಶದಲ್ಲಿ ತೆಂಗಿನ ಬೆಳೆಯ ಇಳುವರಿಯಲ್ಲಿ ಗಣನೆಯ ಪ್ರಮಾಣದ ಇಳಿಮುಖ ಕಂಡುಬಂದಿರುತ್ತದೆ.
ಕಳೆದ ಎರಡು ವರ್ಷಗಳಿಂದ ತಾಲೂಕಿನಲ್ಲಿ ತೆಂಗು ಬೆಳೆಯ ಇಳುವರಿ ಕುಂಟಿತವಾಗಲು ಪ್ರಮುಖ ಕಾರಣವೇನೆಂದರೆ ಅವಮಾನ ವೈಪರಿತ್ಯ ,ಕೀಟ ಮತ್ತು ರೋಗಭಾದೆ ತಾಲೂಕಿನ ತೆಂಗು ಬೆಳೆಯಲ್ಲಿ ಶೇಕಡ 70ರಷ್ಟು ಪ್ರದೇಶದಲ್ಲಿ ಬಿಳಿ ನೋಣಗಳ ಬಾಧೆ, ಕಪ್ಪು ತಲೆ ಹುಳುಗಳು, ಕಾಂಡ ಸೋರುವ ರೋಗ, ಅಣಬೆ ರೋಗ ಮತ್ತು ರೈನಾಸರಸ್ ದುಂಬಿಯ ಹಾವಳಿ ಹೆಚ್ಚಾಗಿರುತ್ತದೆ. ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ, ಪೊಟ್ಯಾಶಿಯಂ, ಸೂಕ್ಷ್ಮಪೋಷಕಾಂಶಗಳು ಮತ್ತು ಸಾವಯವ ಇಂಗಾಲದ ಪ್ರಮಾಣ ಬಹಳ ಕಡಿಮೆ ಇರುವುದರಿಂದ ಮಣ್ಣಿನಲ್ಲಿ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕುಂಠಿತಗೊಂಡಿರುತ್ತದೆ.
ತೆಂಗು ಬೆಳೆಗಾರರು ಸಂಕಷ್ಟದಲ್ಲಿರುವುದನ್ನು ಗಮನಿಸಿ, ಜಿಲ್ಲೆಯ ಅಧಿಕಾರಿಗಳ ತಂಡಗಳನ್ನು ಒಳಗೊಂಡಂತೆ ಕೇಂದ್ರೀಯ ತೋಟಗಳ ಬೆಳೆಗಳ ಸಂಶೋಧನಾ ಕೇಂದ್ರ( ಸಿ ಪಿ ಸಿ ಆರ್ ಐ )ಕಾಸರಗೋಡು ಇಲ್ಲಿಂದ ವಿಜ್ಞಾನಿಗಳಾದ ಡಾ. ಪ್ರತಿಭಾ, ಡಾ ಸುರೇಖಾ ಇವರನ್ನು ದಿನಾಂಕ 17.7.2025 ರಿಂದ 18. 7.2025 ರವರೆಗೆ ಎರಡು ದಿನಗಳ ಕಾಲ ಕೆ ವೆಂಕಟಪುರ, ಬೈರನಾಯಕನಹಳ್ಳಿ, ನಾಗತಿಹಳ್ಳಿ ,ಜಾಜೂರು, ಹಿರಿಯೂರು, ಚಿಕ್ಕೂರು,ಕರಡಿಹಳ್ಳಿ, ಕುರುವಂಕ, ಗರುಡನಗಿರಿ, ಕಲ್ಲುಸಾದರಹಳ್ಳಿ ಗ್ರಾಮಗಳ ತೆಂಗು ತೋಟಗಳಿಗೆ ಭೇಟಿ ನೀಡಿಸಿ ತೆಂಗು ಬೆಳೆಯಲ್ಲಿನ ಇಳುವರಿ ಕುಂಠಿತಕ್ಕೆ ಕಾರಣವೇನು ಎಂಬ ಬಗ್ಗೆ ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ.
ವಿಜ್ಞಾನಿಗಳು ತೆಂಗಿನ ತೋಟಗಳನ್ನು ಪರಿಶೀಲಿಸಿದಾಗ ತೆಂಗು ಬೆಳೆಯಲ್ಲಿ ಸಮಸ್ಯೆ ಆಗಿರುವುದನ್ನು ಗಮನಿಸಿ. ಹೆಚ್ಚಿನ ವಿಶ್ಲೇಷಣೆಗಾಗಿ ರೋಗ ಕೀಟ ಬಾದಿತ ಮತ್ತು ಅನುತ್ಪಾದಕ ತೆಂಗಿನ ತೋಟಗಳ ಎಲೆ ಹಾಗೂ ಮಣ್ಣಿನ ಮಾದರಿಯನ್ನು ಸಂಗ್ರಹಿಸಿರುತ್ತಾರೆ.
ತೆಂಗಿನಲ್ಲಿ ಕಂಡುಬರುವ ಕಪ್ಪು ತಲೆ ಹುಳುಗಳ ನಿಯಂತ್ರಣಕ್ಕೆ ಇಲಾಖೆ ಪ್ರಯೋಗಶಾಲೆಯಲ್ಲಿ ಗೋನಿಯೋಜಸ್ ನಿಫಾಂಡಿಟಿಸ್ ಪರೋಪ ಜೀವಿಗಳನ್ನು ಉತ್ಪಾದಿಸಿ ಬಿಡುಗಡೆ ಗೊಳಿಸಲಾಗುತ್ತಿದೆ. 2024 -25 ನೇ ಸಾಲಿನಲ್ಲಿ 14 ಲಕ್ಷ ಪರೋಪ ಜೀವಿಗಳನ್ನು ಉತ್ಪಾದಿಸಿ ಬಿಡುಗಡೆಗೊಳಿಸಲಾಗಿದ್ದು, 25- 26ನೇ ಸಾಲಿನಲ್ಲಿ ಉತ್ಪಾದನೆ ಗುರಿಯನ್ನು 40 ಲಕ್ಷಗಳಿಗೆ ಹೆಚ್ಚಿಸಲಾಗಿರುತ್ತದೆ ಎಂದು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದಷ್ಟು ಬೇಗ ರೋಗ ನಿಯಂತ್ರಣ ಹಾಗೂ ಪರಿಹಾರಕ್ಕೆ ಆದಷ್ಟು ಬೇಗನೆ ಹಣವನ್ನು ಬಿಡುಗಡೆ ಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಹಾಯಕ ತೋಟಗಾರಿಕ ಅಧಿಕಾರಿ ಸೀಮಾ ಹಾಗೂ ಸಹಾಯಕ ತೋಟಗಾರಿಕಾಧಿಕಾರಿ ಶಿವಕುಮಾರ್, ಸಿಬ್ಬಂದಿಗಳು ಉಪಸ್ಥಿತರಿದ್ದರು.